ನಮ್ಮ ಬೆಂಗಳೂರು ಫೌಂಡೇಶನ್ ನ ಸಂಸ್ಥಾಪಕ ಟ್ರಸ್ಟಿಯಾಗಿರುವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಪ್ರಸ್ತುತ ಸಂಸದರಾಗಿದ್ದು, 2018 ರಲ್ಲಿ ಸತತ ಮೂರನೇ ಬಾರಿಗೆ ರಾಜ್ಯಸಭೆಗೆ ಚುನಾಯಿತರಾಗಿರುತ್ತಾರೆ. ಬೆಂಗಳೂರಿನ ಬಗ್ಗೆ ಅಪಾರ ಕಾಳಜಿ ವಹಿಸಿರುವ ಇವರು, ಬೆಂಗಳೂರನ್ನು ನಿರ್ಮಲ ನಗರವಾಗಿ ಸಂರಕ್ಷಿಸಿ ಪೋಷಿಸಲು ಪಣತೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೂರು ದಶಕಗಳಿಂದ ನೆಲೆಸಿರುವ ಇವರು, ರಾಜ್ಯಸಭೆಗೆ ಬೆಂಗಳೂರು ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಕೂಡ, ಇವರ ಕಾರ್ಯಸೇವಾ ವ್ಯಾಪ್ತಿ ಆ ಎಲ್ಲೆಯನ್ನೂ ಮೀರಿ ಮುಂದುವರಿಯುತ್ತಿದೆ. ಬೆಂಗಳೂರಿನ ಪ್ರಗತಿಗೆ ಹಳೆಯ ಮಾದರಿಯ ಕಾನೂನುಗಳನ್ನು ಪಾಲಿಸುತ್ತಿರುವುದರಿಂದ ಪ್ರತೀಯೊಂದು ನಿರ್ಧಾರಗಳಿಗೂ ಜನರ ಸಮ್ಮತಿಯನ್ನು ಕೇಳುವ ಪರಿಪಾಠ ನಗರದ ಅಭಿವೃದ್ಧಿ ಯೋಜನೆಗಳನ್ನು ದೀರ್ಘಾವಧಿಗೆ ಕೊಂಡೊಯ್ದಿದ್ದು, ಯೋಜನೆಯ ಕಾರ್ಯವೈಖರಿಯಲ್ಲೂ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಡುವ ರಾಜೀವ್ ಚಂದ್ರಶೇಖರ್ ನಗರದ ಅಭಿವೃದ್ಧಿಗೆ ಪ್ರಗತಿಪರ ಚಿಂತನೆಯ ಅಗತ್ಯತೆಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಮುಖಾಂತರ ಬೆಂಗಳೂರಿನ ನಾಗರಿಕರು ಒಟ್ಟಾಗಿ ಕೈಜೋಡಿಸಿ ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಬದ್ಧತೆಯನ್ನು ಖಾತರಿಪಡಿಸಿಕೊಳ್ಳಲು ಮುಂದಾಗಬೇಕೆಂಬ ಹಂಬಲ ಇವರದು.