nbf@namma-bengaluru.org
9591143888

ಅಭಿಯಾನಗಳು

ಮಕ್ಕಳ ಕೆರೆ ಹಬ್ಬ

ಮಕ್ಕಳನ್ನು ತಮ್ಮ ಬಡಾವಣೆಗಳ ಸರಹದ್ದಿನಲ್ಲಿರುವ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಕೆರೆಗಳ ಶುಚಿತ್ವ ಕಾಪಾಡಿಕೊಂಡು ಅದನ್ನು ಸದಾ ಜೀವಜಲಮೂಲವಾಗಿ ಉಳಿಸಿಕೊಳ್ಳುವಲ್ಲಿ ತಾವೂ ಪಾಲುದಾರರಾಗಲು ಪ್ರೇರೇಪಿಸುವುದೇ ಈ ಮಕ್ಕಳ ಕೆರೆ ಹಬ್ಬ ಆಚರಣೆಯ ಮೂಲ ದ್ಯೇಯೋದ್ದೇಶವಾಗಿದೆ. “ನಮ್ಮ ಬೆಂಗಳೂರು ಫೌಂಡೇಶನ್ ಈ ಮಕ್ಕಳ ಕೆರೆ ಹಬ್ಬವನ್ನು ಫೆಬ್ರವರಿ 2020 ರಿಂದ ಒಂದು ವರ್ಷಗಳ ಕಾಲ ಆಚರಿಸಲು ಉದ್ದೇಶಿಸಿದ್ದು, ಇದರಲ್ಲಿ ಹತ್ತು ಕೆರೆಗಳನ್ನು ಸಂಪೂರ್ಣ ಶುಚಿಗೊಳಿಸಿ ಅದರ ಜವಾಬ್ದಾರಿಯನ್ನು ಮಕ್ಕಳೇ ಹೊರುವಂತಹಾ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳ ಕೆರೆ ಹಬ್ಬದಲ್ಲಿ ಜತೆ ಸೇರಿ, ಉಲ್ಲಾಸದಿಂದ ಮನರಂಜನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಎಲ್ಲಾ ಸಮುದಾಯಗಳೂ ಒಟ್ಟಾಗಿ ಇಲ್ಲಿ ಜಲಸಂರಕ್ಷಣಾ ಕಾರ್ಯಗಳಲ್ಲಿ ಮತ್ತಷ್ಟು ಕಾಳಜಿ ಮೂಡಿಸಲು ಜಾಗೃತಿ ಮೂಡಿಸುತ್ತಾರೆ.

ಹಾಗೂ ಈ ಹಿಂದಿನಿಂದ ಆ ಕೆರೆಗಳ ಪ್ರಾಮುಖ್ಯತೆಗಳನ್ನು ವಿವರಿಸುತ್ತಾ ಅವುಗಳ ಇತಿಹಾಸಗಳನ್ನು ಹೇಳುವ ಮೂಲಕ, ಜನರು ಕೂಡ ಆ ಕೆರೆಗಳ ಸಂರಕ್ಷಣೆಯಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಫೌಂಡೇಶನ್, ಶಾಲಾ ಕಾಲೇಜುಗಳು ಹಾಗೂ ಸ್ಥಳೀಯ ಸರ್ಕಾರಗಳೊಂದಿಗೆ ಕೈಜೋಡಿಸಿ 2020 ರ ಫೆಬ್ರವರಿಯಿಂದ ಪ್ರಥಮ ಕೆರೆ ಹಬ್ಬವನ್ನು ಆಚರಿಸುತ್ತಿದೆ.

ಇದರ ಪ್ರಥಮ ಹಂತದಲ್ಲಿ ಜೋಗಿ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಅಭಿಯಾನದಲ್ಲಿ ಸಮುದಾಯವನ್ನು ಯಶಸ್ವಿಯಾಗಿ ಭಾಗವಹಿಸುವಂತೆ ಮಾಡಲು ಸಹಕಾರಿಯಾಯಿತು. ಅಲ್ಲದೆ, ವಿದ್ಯಾರ್ಥಿಗಳೆಲ್ಲರೂ ಕೆರೆಗಳ ಸುತ್ತ ನಡೆದಾಡುವುದು, ವಾಯುವಿಹಾರ ಮಾಡುವುದು, ಗಿಡ ನೆಡುವುದು, ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಪ್ರಬಂಧ ಸ್ಪರ್ಧೆ, ಕ್ವೀಝ್ ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನೂ ಹೊರಹೊಮ್ಮಿಸಿ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರಿಗೂ ಮಾದರಿಯಾದರು.

ಇದು ಕೇವಲ ಆಯಾ ಕೆರೆಗಳ ಸರಹದ್ದಿನ ಮಕ್ಕಳನ್ನು ಒಟ್ಟು ಸೇರಿಸಿ ಹಬ್ಬ ಮಾಡಲು ಮಾತ್ರ ಸಹಕಾರಿಯಾಗಿದ್ದಲ್ಲದೆ, ಅವರಲ್ಲಿ ಕೆರೆಗಳ ಐತಿಹಾಸಿಕ ಹಿನ್ನೆಲೆ, ಅದರ ಪ್ರಾಮುಖ್ಯತೆ, ಅದರ ಅನುಕೂಲಗಳು ಹಾಗೂ ಆ ಕೆರೆಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವಲ್ಲಿ ಅವುಗಳ ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನೂ ಹೆಚ್ಚಿಸಿದೆ.

ಈ ಕೆರೆ ಹಬ್ಬದಲ್ಲಿ ಕೇವಲ ಮಕ್ಕಳು ಮಾತ್ರ ಭಾಗಿಯಾಗಿಲ್ಲ. ಬದಲಾಗಿ, ಸ್ಥಳೀಯ ನಿವಾಸಿಗಳು, ಪರಿಸರ ಪ್ರೇಮಿಗಳೆಲ್ಲರೂ ಒಟ್ಟು ಸೇರಿ ಚಟುವಟಿಕೆಯಿಂದ ಭಾಗಿಯಾಗಿ ಇದೊಂದು ರೀತಿಯಲ್ಲಿ ಬೆಂಗಳೂರಿನ ಕೆರೆಗಳು ಮತ್ತು ಅವುಗಳ ಸತ್ವವನ್ನು ಅರಿತುಕೊಳ್ಳುವುದರೊಂದಿಗೆ ನಿಜವಾದ ಜಲ ಸಂರಕ್ಷಣಾ ಹೋರಾಟವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.

Post a comment