nbf@namma-bengaluru.org
9591143888

ಲಸಿಕೆಗೆ ಚಾಲನೆ

ಬಿಬಿಎಂಪಿ ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಲಸಿಕೆ ವಿತರಣೆ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನ(ಎನ್‌ಬಿಎಫ್)ವನ್ನು ಬಿಬಿಎಂಪಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಅತಿದೊಡ್ಡ ಲಸಿಕೆ ವಿತರಣೆ ಅಭಿಯಾನದ ಅಧಿಕೃತ ಪಾಲುದಾರನಾಗಿ ನೇಮಕ ಮಾಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಸಜ್ಜುಗೊಳಿಸುವ ಮತ್ತು ಲಸಿಕೆ ವಿತರಣೆಯನ್ನು ಹೆಚ್ಚಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ.  

ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ವಾರ್ಡ್ ಸಂಖ್ಯೆ ೬ (ಥಣಿಸಂದ್ರ), ವಾರ್ಡ್ ಸಂಖ್ಯೆ ೪೯ (ಲಿಂಗರಾಜಪುರಂ), ವಾರ್ಡ್ ಸಂಖ್ಯೆ ೧೧೭ (ಶಾಂತಿನಗರ) ಮತ್ತು ವಾರ್ಡ್ ಸಂಖ್ಯೆ ೧೮೩ (ಚಿಕ್ಕಲ್ಲಸಂದ್ರ) ದಲ್ಲಿ ಲಸಿಕೆ ಅಭಿಯಾನ ಆಯೋಜಿಸಿದೆ. ಇಲ್ಲಿನ ಅಪಾರ್ಟ್‌ಮೆಂಟ್ ಸಂಕೀರ್ಣಗಳ ಮತ್ತು ನಗರ ಕೊಳೆಗೇರಿಗಳ ಸುಮಾರು ೧೦೦೦ ಮಂದಿಗೆ ಈ ಅಭಿಯಾನದಲ್ಲಿ ಲಸಿಕೆಯನ್ನು ವಿತರಿಸಲಾಗಿದೆ.

ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಮತ್ತು ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸುವಿಕೆ ಮುಂತಾದ ಕೋವಿಡ್ ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಅಭಿಯಾನವನ್ನು ನಡೆಸಲಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನವು ಬಿಬಿಎಂಪಿ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಇಂತಹ ಮತ್ತಷ್ಟು ಅಭಿಯಾನಗಳನ್ನು ನಡೆಸಲು ಯೋಜಿಸಿದೆ. ಈ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚು ಹೆಚ್ಚು ನಾಗರಿಕರು ಲಸಿಕೆಯನ್ನು ಪಡೆಯುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.

ವ್ಯಾಕ್ಸಿನೇಷನ್ ಡ್ರೈವ್‌ಗೆ ಅಧಿಕೃತ ಪಾಲುದಾರರಾಗಿ NBF ಅನ್ನು ನೇಮಿಸುವ BBMP ಪತ್ರ

ಕೋವಿಡ್-೧೯ರ ಎರಡನೇ ಅಲೆಯ ವಿರುದ್ಧದ ನಿರಂತರ ಹೋರಾಟ ಮತ್ತು ಸೋಂಕಿನಿಂದ ಬೆಂಗಳೂರಿಗರನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ಬಿಬಿಎಂಪಿ ಸಹಯೋಗದಲ್ಲಿ ಮಹದೇವಪುರ ವಲಯದಲ್ಲೂ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಂಡವು ೨೦ ಬೇರೆ ಬೇರೆ ಪ್ರದೇಶಗಳ ಸೋಂಕಿಗೆ ಬೇಗನೆ ತುತ್ತಾಗಬಲ್ಲಂಥ ಸುಮಾರು ೬೦೦೦ ನಾಗರಿಕರಿಗೆ ಲಸಿಕೆ ವಿತರಿಸಿದೆ. ಅಲ್ಲದೇ, ಈ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರನ್ನು ಕೋವಿಡ್ ಪರೀಕ್ಷೆಗೂ ಒಳಪಡಿಸಲಾಗಿದೆ.

Post a comment