ನಮ್ಮ ಬೆಂಗಳೂರು ಫೌಂಡೇಶನ್, ಹುಳಿಮಾವು ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಹುಳಿಮಾವು ಕೆರೆ ತರಂಗ ಸಂಸ್ಥೆಯ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಕೆರೆಗಳನ್ನು ಕಸ ಹಾಕಿ ಕಲುಷಿತಗೊಳಿಸಿರುವುದು ಹಾಗೂ ಮಣ್ಣು ಹಾಕಿ ಅತಿಕ್ರಮಣ ಮಾಡಿರುವುದನ್ನು ಸ್ವತಃ ಪರಿಶೀಲಿಸಿ, ಈ ವಿಚಾರವನ್ನು ನವೆಂಬರ್ 25, 2019 ರಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಕೆರೆಯ ಸಂರಕ್ಷಣೆಯಲ್ಲಿ ಬದ್ಧತೆಯನ್ನು ತೋರಿಸುವುದರೊಂದಿಗೆ, ಇದರಿಂದ ಬಾಧಿತರಾದ ಸ್ಥಳೀಯ ನಿವಾಸಿಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿತು.
ಬೆಂಗಳೂರಿನಲ್ಲಿ ಈಗಾಗಲೇ ಅವಸಾನದ ಅಂಚಿನಲ್ಲಿರುವ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಒತ್ತಾಯಿಸಿ ಅದನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವ ಉದ್ದೇಶದೊಂದಿಗೆ, ನಮ್ಮ ಬೆಂಗಳೂರು ಫೌಂಡೇಶನ್ ‘ಯುನೈಟೆಡ್ ಬೆಂಗಳೂರು’ ಎಂಬ ಅಭಿಯಾನವನ್ನು 2017 ರಲ್ಲಿ ಪ್ರಾರಂಭಿಸಿತು.
ಈ ಅಭಿಯಾನದ ಉದ್ದೇಶವಿದ್ದಿದ್ದು, ಅಲ್ಲಿನ ಸ್ಥಳೀಯ ಆಡಳಿತ, ನಾಗರಿಕರನ್ನು ಹಾಗೂ ಸ್ಥಳೀಯ ಕೆರೆ ಸಂರಕ್ಷಣಾ ಸಂಘಟನೆಗಳನ್ನು ಒಟ್ಟು ಸೇರಿಸಿ, ಕೆರೆಗಳಿಗೆ ಕಸ ಸುರಿಯಲಾಗುತ್ತಿರುವುದನ್ನು ತಡೆಗಟ್ಟಿ, ಕೆರೆಯಲ್ಲಿ ಮತ್ತೆ ನೈಸರ್ಗಿಕವಾಗಿ ನೀರೂರುವಂತೆ ಕ್ರಮವಹಿಸಿ, ಬೆಂಗಳೂರಿನಲ್ಲಿರುವ ಎಲ್ಲಾ ಕೆರೆಗಳ ಪ್ರದೇಶವನ್ನು ಯಾವುದೇ ರೀತಿಯ ಪಟ್ಟಭದ್ರ ಹಿತಾಸಕ್ತಿಗಳ ಅತಿಕ್ರಮಣಕ್ಕೆ ಅವಕಾಶ ಕಲ್ಪಿಸದಂತೆ ಜವಾಬ್ದಾರಿ ವಹಿಸುವ ಆಶಯ ಹೊಂದಲಾಗಿತ್ತು.
ಯುನೈಟೆಡ್ ಬೆಂಗಳೂರು ಅಭಿಯಾನದ ಮುಖಾಂತರ ಸ್ಥಳೀಯ ನಾಗರಿಕರು, ಕೆರೆ ಸಂರಕ್ಷಣಾ ಸಂಘ ಸಂಸ್ಥೆಗಳು, ಪರಿಸರವಾದಿಗಳು, ಮಾಧ್ಯಮ ಹಾಗೂ ಇನ್ನಿತರ ಸಾಮಾಜಿಕ ಕಾಳಜಿ ಹೊಂದಿರುವ ಜನರನ್ನು ಒಟ್ಟು ಸೇರಿಸಿ ಬೆಂಗಳೂರಿನಲ್ಲಿರುವ ಸುಮಾರು 23 ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ 23 ಕೆರೆಗಳು ಒಂದಲ್ಲಾ ಒಂದು ರೀತಿಯಲ್ಲಿ ಮಲಿನಗೊಂಡಿರುವುದಲ್ಲದೆ, ಕಾನೂನು ಭಾಹಿರವಾಗಿ ಅತಿಕ್ರಮಿಸಿ ಪೋಲು ಮಾಡಿರುವುದನ್ನು ಗಮನಿಸಿ, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿ, ಇದೀಗ 23 ಪ್ರಕರಣಗಳು ಲೋಕಾಯುಕ್ತದಲ್ಲಿ ವಿಚಾರಣೆಯಲ್ಲಿದೆ.
ಪರಿಣಾಮವಾಗಿ, ಲೋಕಾಯುಕ್ತದ ಆದೇಶದ ಮೇರೆಗೆ ಇದುವರೆಗೂ 13 ಕೆರೆಗಳ ಸರ್ವೇ ಕಾರ್ಯ ಮಾಡಲಾಗಿದ್ದು, ಈ ಸರ್ವೇ ಕಾರ್ಯಗಳಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕರ್ತರು ಚಟುವಟಿಕೆಯಿಂದ ಭಾಗವಹಿಸಿರುತ್ತಾರೆ.
ಯುನೈಟೆಡ್ ಬೆಂಗಳೂರು ಅಭಿಯಾನದ ಭಾಗವಾಗಿ, ಈ ಕೆರೆಗಳ ಸಂರಕ್ಷಣೆಯ ಸಂಬಂಧ ನಿರಂತರವಾಗಿ ಪ್ರತೀ ಪ್ರಕರಣದ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತಾ ಸಮಾಲೋಚಿಸಿ, ಲೋಕಾಯುಕ್ತದ ಆದೇಶವನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕೆಂದು ಜನಸಾಮಾನ್ಯರನ್ನು ಜಾಗ್ರತೆ ವಹಿಸುವಂತೆ ಮಾಡಿದ ಪರಿಣಾಮವಾಗಿ, ಸ್ಥಳೀಯ ಆಡಳಿತ ಈ ಕುರಿತು ಮತ್ತಷ್ಟು ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಅನುಕೂಲವಾಯಿತಲ್ಲದೆ, ಅದರ ಅಭಿವೃದ್ಧಿ ಕಾರ್ಯಗಳು ಪ್ರಗತಿಯಿಂದ ಸಾಗಲು ಸಾಧ್ಯವಾಗಿದೆ.
ವೀಡಿಯೊ ನೋಡಲು ಮುಂದಿನ ಯುಟ್ಯೂಬ್ ಲಿಂಕನ್ನು ಕ್ಲಿಕ್ ಮಾಡಿ:
Post a comment