ಬೆಂಗಳೂರು ಅಭೂತಪೂರ್ವ ಬೆಳವಣಿಗೆ ಹಾಗೂ ಅನುಷ್ಠಾನಗೊಂಡ ದುರ್ಬಲ ಯೋಜನೆಗಳಿಗೆ ದಂಡ ತೆರುತ್ತಿದೆ. ನಾನಾ ಏಜೆನ್ಸಿಗಳು ಮನಬಂದಂತೆ ರೂಪಿಸಿದ ತಾತ್ಕಾಲಿಕ ಮ್ಯಾಜಿಕ್ ಬಾಕ್ಸ್‍ಗಳು, ಕೆಳ ಸೇತುವೆಗಳು ಹಾಗೂ ಮೇಲ್ಸೇತುವೆಗಳ ನಿರ್ಮಾಣದಿಂದ ಸಾರ್ವಜನಿಕ ಹಣ ವ್ಯರ್ಥವಾಗಿದೆ. ಮತ್ತು ಧಾಂಧೂಂ ಎಂದು ಆರಂಭವಾದ ಹಲವು ಭಾರಿ ಯೋಜನೆಗಳಿಂದ ಅಂತಿಮವಾಗಿ ಸಂಚಾರ ದಟ್ಟಣೆ ಒಂದು ಕಡೆಯಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾಗಿದೆ.
ಇಡೀ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೆ ಮುಂದಿನ 25 ವರ್ಷಗಳ ಅವಧಿಗೆ ಸೂಕ್ತವಾದ ಕಾರ್ಯಯೋಜನೆಗಳು, ಕಾರ್ಯನೀತಿಗಳು ಹಾಗೂ ಆದ್ಯತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕೆಂದು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಪಿಎಂಸಿ)ಯ ನಿಯಮಗಳು ಹೇಳುತ್ತವೆ.
ಸಮಿತಿಯು ಸ್ಥಳೀಯ ಯೋಜನೆಗಳಿಗೆ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಗೆ ಹಣ ಬಿಡುಗಡೆ ಮಾಡುವ ಮತ್ತು ಅವುಗಳ ವಾರ್ಷಿಕ ಭೌತಿಕ ಸಾಧನೆಯನ್ನು ಮೇಲುಸ್ತುವಾರಿ ಮಾಡುವ ಮಧ್ಯಂತರ ಏಜೆನ್ಸಿಯಾಗಿದೆ. ಹೀಗಾಗಿ, ನಗರದ ಹೃದಯ ಭಾಗದ ಪ್ರಮುಖ ಕಾರಿಡಾರ್ ಒಂದರ ಜನದಟ್ಟಣೆ ಕಡಿಮೆ ಮಾಡಲು ಯೋಜಿಸಿರುವ 1,791 ಕೋಟಿ ರೂ. ವೆಚ್ಚದ ಯೋಜನೆಯನ್ನು ಬಿಎಂಸಿ ಮುಂದೆ ಇರಿಸಿ, ಅನುಮತಿ ಪಡೆಯಬೇಕಾದ ಅಗತ್ಯವಿದೆ.
ನಗರದಲ್ಲಿ ಭೂಮಿ ಪರಿವರ್ತನೆ ವೇಳೆ ಬಿಎಂಪಿಸಿಯ ಅನುಮತಿ ಪಡೆಯಬೇಕೆಂದು ನ್ಯಾಯಾಲಯಗಳು ಕೂಡ ಆಗಾಗ ಹೇಳುತ್ತಲೇ ಇವೆ. ಉದ್ದೇಶಿತ ಉಕ್ಕಿನ ಮೇಲ್ಸೇತುವೆಯು ಬೆಂಗಳೂರಿನ ಸ್ಥಳಾವಕಾಶ ಯೋಜನೆ ಮೇಲೆ ಪರಿಣಾಮ ಬೀರುವುದರಿಂದ, ಅದು ಬಿಎಂಪಿಸಿಯ ಪರಿಶೀಲನೆಗೆ ಒಳಪಡದೆ ಅನುಷ್ಠಾನಗೊಳ್ಳಬಾರದು.
ಬೆಂಗಳೂರು ಸುಸ್ಥಿರ ನಗರೀಕರಣದ ಅತ್ಯುತ್ತಮ ಉದಾಹರಣೆ ಆಗಬೇಕೆಂದಿದ್ದರೆ ಹಾಗೂ ಇದನ್ನು ಸಾಂವಿಧಾನಿಕ ಕಡ್ಡಾಯ ಉಪಕ್ರಮಗಳಿಂದ ಸಾಧಿಸಬೇಕೆಂದಿದ್ದರೆ, ಅಭಿವೃದ್ಧಿಯನ್ನು ಜನರ ಪಾಲ್ಗೊಳ್ಳುವಿಕೆ ಮೂಲಕ ಮಾಡಬೇಕಿದೆ. ಇಲ್ಲವಾದರೆ, ನಮ್ಮ ಪ್ರೀತಿಯ ನಗರದ ಭವಿಷ್ಯ ಕರಾಳವಾಗಲಿದೆ.
Post a comment