nbf@namma-bengaluru.org
9591143888

ಅಭಿಯಾನಗಳು

ಉಕ್ಕಿನ ಮೇಲ್ಸೇತುವೆ ಬೇಡ

ಬೆಂಗಳೂರಿಗರಲ್ಲಿ ಹೆಚ್ಚಿನವರು ಇಂದು ಬೇಸರಗೊಂಡಿದ್ದಾರೆ. ಬೇಸರ ಸರ್ಕಾರ ಇನ್ನೊಂದು ಮೂಲಸೌಕರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕಲ್ಲ: ಬದಲಿಗೆ, ನಗರಕ್ಕೆ ಇಲ್ಲವೇ ಜನರಿಗಾಗಲೀ ಬೇಕಿಲ್ಲದ ಯೋಜನೆಯೊಂದಕ್ಕೆ ಸರ್ಕಾರ ಅನುಮತಿ ನೀಡಿದೆ. ಉದ್ದೇಶಿತ ಉಕ್ಕಿನ ಮೇಲ್ಸೇತುವೆಯನ್ನು ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ರಸ್ತೆವರೆಗೆ ನಿರ್ಮಿಸ ಲಾಗುತ್ತದೆ. ಎನ್‍ಬಿಎಫ್‍ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಯೋಜನೆಯನ್ನು ಮುಂದುವರಿಸಬಾರದೆಂದು ಹೇಳಿದ್ದರೂ, ರಾಜ್ಯ ಸರ್ಕಾರ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿದೆ. ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಹಾಗೂ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಇಂಥ ತಾತ್ಕಾಲಿಕ ಯೋಜನೆಗಳನ್ನು ನಮ್ಮ ನಗರ ತಾಳಿಕೊಳ್ಳುವುದೇ?

ಉದ್ದೇಶಿತ ಯೋಜನೆಯ ಮೂರು ಮೂಲಭೂತ ಸಂಗತಿಗಳೆಂದರೆ,

  • ರಹಸ್ಯದ ಮುಸುಕು ಮತ್ತು ಸಾರ್ವಜನಿಕ ಕೇಳ್ವೆ ಇಲ್ಲದಿರುವುದು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆ ಬಗ್ಗೆ ಯಾವುದೇ ವಿವರ ನೀಡಲು ನಿರಾಕರಿಸಿದ ಕ್ಷಣವೇ ಉಕ್ಕಿನ ಮೇಲ್ಸೇತುವೆ ಯೋಜನೆ ಬಗ್ಗೆ ಸಂಶಯ ಹುಟ್ಟಿಕೊಂಡಿತು. ಯೋಜನೆಯ ವಿವರಗಳನ್ನು ಬಿಡಿಎ ಏಕೆ ಬಹಿರಂಗಗೊಳಿಸುತ್ತಿಲ್ಲ ಮತ್ತು ಸರ್ಕಾರ ಯೋಜನೆಗೆ ಅನುಮತಿ ನೀಡುವ ಮುನ್ನ ಸಾರ್ವಜನಿಕ ಸಂವಾದ ಏಕೆ ನಡೆಸಲಿಲ್ಲ? ವಿವರ ಕೋರಿ ಎನ್‍ಬಿಎಫ್ ಹಲವು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿದರೂ, ಪ್ರಯೋಜನ ಆಗಲಿಲ್ಲ. ಯೋಜನೆಯ ವಿವರ, ವೆಚ್ಚ, ಕಾಲಾವಧಿ ಇತ್ಯಾದಿ ರಹಸ್ಯವಾಗೇ ಇದೆ. ವಿವರವಾದ ಯೋಜನಾ ವರದಿ(ಡಿಪಿಆರ್) ಮಾತ್ರವಲ್ಲದೆ, ಜನರಿಗೆ ಕೆಳಕಂಡ ಮಾಹಿತಿ ಪಡೆಯಲು ಎಲ್ಲ ಹಕ್ಕು ಇದೆ:
    • ಯೋಜನೆಗೆ ಬೇಕಾದ ಭೂಮಿಯ ಸ್ವಾಧೀನ ಹಾಗೂ ಅದರ ವಿವರ
    • ವಿನ್ಯಾಸ ಹಾಗೂ ನಿರ್ವಹಣೆ ವಿವರಗಳು
    • ಸರ್ಕಾರ ಕಾಂಕ್ರೀಟ್ ಸೇತುವೆ ಬದಲು ಉಕ್ಕಿನ ಸೇತುವೆ ನಿರ್ಮಿಸುತ್ತಿರುವುದೇಕೆ?
    • ಹಾಲಿ ಮೂಲಸೌಲಭ್ಯವೇನಾದರೂ ಕೆಡವಲ್ಪಡುತ್ತಿದೆಯೇ?
    • ಮಾಸ್ಟರ್ ಪ್ಲಾನ್‍ನಲ್ಲಿ ಇಲ್ಲದ ಯೋಜನೆಯ ನಿರ್ಮಾಣದಿಂದ ಆಗಬಹುದಾದ ಪರಿಣಾಮವೇನು?
  • ಸರ್ಕಾರ ಮತ್ತು ಅದರ ಏಜೆನ್ಸಿಗಳು ಜನರ ಜತೆಗೂಡಿ ಕೆಲಸ ಮಾಡುವಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಿದ್ದು, ಇದರಿಂದ ಸಹಭಾತಿತ್ವಕ್ಕಿಂತ ಸಂಘರ್ಷ ಹೆಚ್ಚುತ್ತಿದೆ. ಸರ್ಕಾರದ ಕಡೆಯಿಂದ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯ ಕೊರತೆಯಿಂದ ಬೆಂಗಳೂರು ಹಾಗೂ ಅದರ ನಿವಾಸಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ.
  • ಸರ್ಕಾರ ಎಂಪಿಸಿ ಬಗ್ಗೆ ಕಾಳಜಿ ಹೊಂದಿದೆಯೇ? ಬೆಂಗಳೂರಿನ ಅಧೀನ ಯೋಜನಾ ಸಂಸ್ಥೆಯಾದ ಮೆಟ್ರೋಪಾಲಿಟನ್ ಯೋಜನಾ ಸಮಿತಿಯನ್ನು ಯಾವುದೇ ಹಂತದಲ್ಲೂ ಪರಿಗಣಿಸಿಲ್ಲ. ಯೋಜನೆಗೆ ಬಿಡಿಎಗೆ ಸೇರಿದ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿರುವುದನ್ನು ನೋಡಿದರೆ, ಸಾಂವಿಧಾನಿಕ ಸಂಸ್ಥೆ ಬಗ್ಗೆ ಸರ್ಕಾರ ಎಂಥ ನಿರ್ಲಕ್ಷ್ಯ ತೋರಿಸಿದೆ ಎನ್ನುವುದು ಗೊತ್ತಾಗಲಿದೆ.
  • ಯೋಜನೆಯ ಪರಿಣಾಮ ಕುರಿತ ಅಧ್ಯಯನ ನಡೆದಿದೆಯೇ? ಉದ್ದೇಶಿತ ಯೋಜನೆಗೆ 812 ಬೆಳೆದ ಮರಗಳು ಬಲಿಯಾಗಲಿವೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದು, ಇಂಥ ಭಾರಿ ಮೂಲಸೌಲಭ್ಯ ಯೋಜನೆಯಿಂದ ಪರಿಸರ ಹಾಗೂ ನಗರದ ಸೌಂದರ್ಯದ ಮೇಲೆ ಆಗುವ ಪರಿಣಾಮ ಕುರಿತು ಸ್ಪಷ್ಟತೆ ಬೇಕಿದೆ. ಬೆಂಗಳೂರು “ಉದ್ಯಾನಗಳ ನಗರ’ ಎನ್ನುವ ಕೀರ್ತಿ ಕಾಲ ಕ್ರಮೇಣ ಕುಸಿದಿದೆ ಹಾಗೂ ನಗರದ ಸಾರ-ಸತ್ವವನ್ನು ನಾಶ ಮಾಡುವ ಇಂಥ ಯೋಜನೆಗಳನ್ನು ಪ್ರೋತ್ಸಾಹಿಸಿದಲ್ಲಿ, ಬೆಂಗಳೂರನ್ನು “ಸ್ಮಶಾನಗಳ ನಗರ’ ಎಂದು ಜಗತ್ತು ಗುರುತಿಸುವ ಕಾಲ ದೂರ ಇಲ್ಲ.

ನಾಗರಿಕ ಸಂಸ್ಥೆಗಳು ಹಾಗೂ ಆಡಳಿತಗಾರರು ಮಾಹಿತಿ ಪಡೆಯುವ ಜನರ ಹಕ್ಕನ್ನು ಗೌರವಿಸಬೇಕು ಹಾಗೂ 6.7 ಕಿಮೀ ಉದ್ದದ ಉಕ್ಕಿನ ಮೇಲ್ಸೆತುವೆಯಂಥ ಪ್ರಮುಖ ಯೋಜನೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರ ಹಕ್ಕನ್ನು ಗುರುತಿಸಬೇಕು. ಬೇಡಿಕೆ ಬೆಳಕಿನಷ್ಟೇ ಸ್ಪಷ್ಟವಾಗಿದೆ- ಯೋಜನೆ ಯಾವುದೇ ಇರಲಿ, ಸಾರ್ವಜನಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳದೆ ಇರುವವರೆಗೆ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೆ ಇದ್ದರೆ, ಅಂಥ ಯೋಜನೆಗಳಿಗೆ ಅನುಮತಿ ನೀಡಬಾರದು.

Read more
NBF’s PIL against Steel Flyover project
Human Chain against Steel Flyover
Online petition against the steel flyover project
Letter to BDA Commissioner opposing project

Post a comment