nbf@namma-bengaluru.org
9591143888

ಅಭಿಯಾನಗಳು

ಭ್ರಷ್ಟಾಚಾರದಿಂದ ಧೂಳೀಪಟ

ದೇಶದ ಐಟಿ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರು, ತಾಂತ್ರಿಕ ಹಾಗೂ ಡಿಜಿಟಲ್ ಕ್ರಾಂತಿಯ ಯುಗಕ್ಕೆ ದೇಶವನ್ನು ಮುನ್ನಡೆಸಿದೆ. ಆದರೆ, ಪ್ರಸ್ತುತ ಅನಿಯಂತ್ರಿತ ನಗರೀಕರಣ, ಲಂಗುಲಗಾಮಿಲ್ಲದ ಬೆಳವಣಿಗೆ ಹಾಗೂ ನಗರವನ್ನು ಆಳುತ್ತಿರುವವರಲ್ಲಿ ಉತ್ತರದಾಯಿತ್ವದ ಕೊರತೆಯಿಂದಾಗಿ, ಬಲಿಪಶುವಾಗಿ ಪರಿಣಮಿಸಿದೆ. ಮಳೆ ನೀರು ಕಾಲುವೆಗಳ ಮೇಲೆ ನಿರ್ಮಾಣಗೊಂಡ ಅನಧಿಕೃತ ನಿರ್ಮಿತಿಗಳನ್ನು ಬಿಬಿಎಂಪಿ ಕೆಡವುತ್ತಿರುವುದು ಹಣವಂತರು ಹಾಗೂ ರಾಜಕೀಯ ಪ್ರಾಬಲ್ಯವಿರುವ ಬಿಲ್ಡರ್‍ಗಳಿಗೆ ನಗರವನ್ನು “ಮಾರಾಟ’ ಮಾಡಿರುವುದಕ್ಕೆ ಸಾಕ್ಷಿ. ತಮ್ಮದಲ್ಲದ ತಪ್ಪಿಗೆ ಜನ ನರಳುತ್ತಿದ್ದರೆ, ನಗರವನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ಹೊತ್ತವರು ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ.

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ 1976 ಹಾಗೂ ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾಯಿದೆ 1964ರ ಅನ್ವಯ, ಕಾನೂನುಗಳ ಜಾರಿ ಹಾಗೂ ವಲಯಗಳ ನಿಯಂತ್ರಣಗಳು ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ. ಸರ್ಕಾರದ ಏಜೆನ್ಸಿಗಳ ಸಹಕಾರ ಪಡೆದೇ ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದರಿಂದ, ಈ ಕಾನೂನುಗಳು ಸ್ಪಷ್ಟವಾಗಿ ಉಲ್ಲಂ ಘನೆ ಆಗಿವೆ. ಇದರಿಂದ ತಲೆಯೆತ್ತುವ ಪ್ರಶ್ನೆಗಳೆಂದರೆ, ರಾಜ್ಯ ಸರ್ಕಾರ ಇಂಥ ಉಲ್ಲಂಘನೆಗಳನ್ನು ಗುರುತಿಸಿ, ನಗರವನ್ನು ಹಾಳು ಮಾಡಿದವರಿಗೆ ಶಿಕ್ಷೆ ವಿಧಿಸುವುದೇ?

ಕೆಲವು ವರ್ಷಗಳವರೆಗೆ ನಗರದ ಕೆರೆಗಳು ನಾಲೆಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದವು: ಇದರಿಂದ ನೀರು ಸುಲಭವಾಗಿ ಹರಿದು ಇಲ್ಲವೇ ಸೋರಿ ಹೋಗುತ್ತಿತ್ತು. ಆದರೆ, ಯೋಜನಾರಹಿತ ಬೆಳವಣಿಗೆ ಹಾಗೂ ಬಿಲ್ಡರ್-ಡೆವಲಪರ್‍ಗಳ ದುರಾಸೆಯು ಮಳೆ ನೀರಿನ ಕಾಲುವೆಗಳ ಮೇಲೆ ಮನೆಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಇದರ ಫಲಶ್ರುತಿಯೇ ಪ್ರವಾಹ ಹಾಗೂ ನಾಗರಿಕರ ಬವಣೆ. ಕಳೆದ ತಿಂಗಳ ಪ್ರವಾಹವು ಅಧಿಕಾರಿಗಳು ಎಚ್ಚರಗೊಳ್ಳುವಂತೆ ಮಾಡಿತು ಹಾಗೂ ಇಂಥ ನಿರ್ಮಿತಿಗಳನ್ನು ಅವರು ಗಮನಿಸುವಂತಾಯಿತು. ಆದರೆ, ಆಘಾತಕರ ವಿಷಯವೆಂದರೆ, ಅವರುಗಳು 1905ರ ಬ್ರಿಟಿಷರ ಕಾಲದ ಹಳೆಯ ಭೂಪಟವನ್ನು ಆಧರಿಸಿ, ಕೆರೆಗಳು ಹಾಗೂ ನಾಲೆಗಳ ಮೂಲ ಗಡಿಗಳನ್ನು ಗುರುತು ಮಾಡಿದರು. ದುರದೃಷ್ಟವಶಾತ್, ನಗರ ಬೆಳೆಯಿತೇ ಹೊರತು ಅದರ ಬೆಳವಣಿಗೆಗೆ ಅನುಗುಣವಾಗಿ ಭೂಪಟ ಸಿದ್ಧವಾಗಲಿಲ್ಲ. ಭೂಮಿ ದಾಖಲೆಗಳು ಅಸ್ತವ್ಯಸ್ತವಾಗಿರುವುದರಿಂದ, ಅವನ್ನು ನಂಬಲು ಸಾಧ್ಯವಿಲ್ಲ. ತಮ್ಮ ಸರ್ವೇಕ್ಷಣೆ ಕೆಲಸದಲ್ಲಿ ಸರ್ಕಾರದ ಸಂಸ್ಥೆಗಳು ಹೀನಾಯವಾಗಿ ವಿಫಲವಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಇಂಥ ಭಾರಿ ಆಡಳಿತಾತ್ಮಕ ವೈಫಲ್ಯದ ಹೊಣೆ ಹೊರುವವರು ಯಾರು? ಜನಸಾಮಾನ್ಯರ ಕಷ್ಟದ ದುಡಿಮೆಯನ್ನು ತಮ್ಮ ಜೇಬಿಗೆ ತುಂಬಿಕೊಳ್ಳುವ ಭ್ರಷ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವವರು ಯಾರು?

ಇಂಥ ಉದ್ದೇಶಪೂರ್ವಕ ಹಾಗೂ ಭ್ರಷ್ಟ ಕ್ರಿಯೆಗಳನ್ನು ಗಮನಿಸಲು ಹಾಗೂ ನಾಗರಿಕರಿಗೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿಯನ್ನು ಸಾರ್ವಜನಿಕ ಅಧಿಕಾರಿಗಳು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನಿರ್ಣಾಯಕವಾಗಿ ಬದಲಿಸಲು ರಾಜ್ಯ ಸರ್ಕಾರಕ್ಕೆ ಇದು ಸೂಕ್ತ ಕಾಲ. ಇದರಲ್ಲಿ ವಿಫಲವಾದಲ್ಲಿ, ಬೆಂಗಳೂರನ್ನು ಹಿಂದಿರುಗಿ ಬರಲು ಆಗದ ಜಾರುದಾರಿಯಲ್ಲಿ ತಳ್ಳಿದಂತೆ ಆಗಲಿದೆ.

ಭ್ರಷ್ಟಾಚಾರದಿಂದ ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ನೆರವಾಗಲು ಹಾಗೂ ಸರ್ಕಾರಕ್ಕೆ ಸಂದೇಶವನ್ನು ರವಾನಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನವು ಸಂಸ್ಥಾಪಕ ಟ್ರಸ್ಟಿ, ಸಂಸದ ರಾಜೀವ್ ಚಂದ್ರಶೇಖರ್ ಅವರೊಡನೆ ಸಂತ್ರಸ್ತರನ್ನು ಭೇಟಿ ಮಾಡಿ, ಬೆಂಗಳೂರನ್ನು ಭ್ರಷ್ಟಾಚಾರದಿಂದ ಹಾಗೂ ದುರಾಡಳಿತದಿಂದ ಮುಕ್ತಗೊಳಿಸಲು ಏನು ಮಾಡಬೇಕು, ಮುಂದಿನ ದಾರಿಯೇನು ಎಂಬ ಬಗ್ಗೆ ಚರ್ಚೆ ನಡೆಸಿತು.

ನಮ್ಮ ಬೆಂಗಳೂರು ನಾಗರಿಕ ಸಮಿತಿ

ನಮ್ಮ ಬೆಂಗಳೂರು ಫೌಂಡೇಷನ್ ಪ್ರಸಿದ್ಧ ನಾಗರಿಕರು ಹಾಗೂ ಕಾನೂನು ಪರಿಣತರನ್ನು ಒಳಗೊಂಡ ನಮ್ಮ ಬೆಂಗಳೂರು ನಾಗರಿಕ ಸಮಿತಿ(ಎನ್‍ಬಿಸಿಸಿ) ರಚಿಸಿದೆ. ಈ ಸಮಿತಿಯು ವರದಿಯಾದ ಎಲ್ಲ ಭೂಮಿ ಕೈವಶ, ಒತ್ತುವರಿ ಹಾಗೂ ಅಕ್ರಮಗಳನ್ನು ಪರಿಶೀಲಿಸಲಿದೆ ಹಾಗೂ ಕಂಡುಕೊಂಡ ವಿವರಗಳನ್ನು ಸಂಬಂಧಿಸಿದ ಪ್ರಾಧಿಕಾರ, ಸರ್ಕಾರದ ಏಜೆನ್ಸಿಗಳು, ಮಾಧ್ಯಮ ಹಾಗೂ ಕಾನೂನು ಕ್ರಮಕ್ಕೆ ರವಾನಿಸಲಿದೆ.

ನಾಗರಿಕರು ಇನ್ನುಮುಂದೆ ನಮ್ಮ ಬೆಂಗಳೂರು ನಾಗರಿಕ ಸಮಿತಿಯನ್ನು ಸಂಪರ್ಕಿಸಿ, ಟಿbಛಿಛಿ@ಞಚಿಟಿಟಿಚಿಜಚಿ.ಟಿಚಿmmಚಿ-beಟಿgಚಿಟuಡಿu.oಡಿg ಕೆಳಕಂಡ ಸಂಗತಿಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಬಹುದು:

  1. ಮಳೆ ನೀರು ಕಾಲುವೆ, ಕೆರೆಗಳು, ಸಾರ್ವಜನಿಕ ಭೂಮಿ ಹಾಗೂ ಅಕ್ರಮ ನಿರ್ಮಾಣಗಳ ಕುರಿತು ಮಾಹಿತಿ ಹಾಗೂ ವಿವರ
  2. ಇಂಥ ಅಕ್ರಮಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪಾಲ್ಗೊಂಡಿದ್ದರೆ, ಆ ಕುರಿತ ದಾಖಲೆಗಳು

ಸಮಿತಿ ಸದಸ್ಯರು- ಶ್ರೀ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ; ಶ್ರೀಕೃಷ್ಣ, ವಿಧಾನಸಭೆ ಮಾಜಿ ಸಭಾಧ್ಯಕ್ಷ; ಶ್ರೀಎ.ಟಿ.ರಾಮಸ್ವಾಮಿ, ಅಧ್ಯಕ್ಷ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿ ಕುರಿತ ಜಂಟಿ ಶಾಸಕಾಂಗ ಸಮಿತಿ; ಶ್ರೀ ವಿ.ಬಾಲಸುಬ್ರಮಣಿಯನ್, ಮಾಜಿಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ; ಶ್ರೀ ಬಿ.ಎನ್.ವಿಜಯಕುಮಾರ್, ಶಾಸಕ, ಜಯನಗರ ಮತಕ್ಷೇತ್ರ; ಶ್ರೀ ಪೃಥ್ವಿ ರೆಡ್ಡಿ, ಸಂಚಾಲಕ,ಆಮ್ ಆದ್ಮಿ ಪಕ್ಷ(ಕರ್ನಾಟಕ); ಶ್ರೀ ಸಜನ್ ಪೂವಯ್ಯ, ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತುರಾಜೀವ್ ಚಂದ್ರಶೇಖರ್, ಸಂಸದ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಸಂಸ್ಥಾಪಕ ಟ್ರಸ್ಟಿ- ಇಂಥ ಅಕ್ರಮಗಳ ಕುರಿತ ದೂರನ್ನು ಸೂಕ್ತಪ್ರಾಧಿಕಾರಕ್ಕೆ ಕಳಿಸಿಕೊಡಲಿದ್ದಾರೆ.

Note: Your identity will be kept confidential.
Read more

Post a comment