nbf@namma-bengaluru.org
9591143888

ಅಭಿಯಾನಗಳು

ಬನ್ನೇರುಘಟ್ಟ ಇ.ಎಸ್.ಝೆಡ್ ಅಧಿಸೂಚನೆ ವಿರುದ್ಧ ನಮ್ಮ ಬೆಂಗಳೂರು ಫೌಂಡೇಶನ್ ಪ್ರತಿಭಟನೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬೆಂಗಳೂರಿನ ಜನಜೀವನದಲ್ಲಿ ಹಲವಾರು ಕಾರಣಗಳಿಂದ ಮಹತ್ವದ ಪಾತ್ರವಹಿಸಿದೆ. ಇದು ಕೇವಲ ವನ್ಯಪ್ರಾಣಿಗಳಿಗೆ ಮಾತ್ರ ಆಶ್ರಯತಾಣವಾಗಿ ಇರುವುದಲ್ಲದೆ, ಬೆಂಗಳೂರು ನಗರಕ್ಕೆ ಅತೀ ಸಾಮಿಪ್ಯದಲ್ಲಿರುವ ಹಚ್ಚಹಸಿರಿನ ಪ್ರದೇಶಗಳಲ್ಲಿ ಪ್ರಮುಖವಾದುದಾಗಿದೆ. ಇದು ಇಲ್ಲಿನ ಜೀವ ವೈವಿದ್ಯತೆಯ ಸಮತೋಲನದೊಂದಿಗೆ, ಭೂ ತಾಪಮಾನವನ್ನು ಸರಿದೂಗಿಸಿ ಪರಿಸರಕ್ಕೆ ಉತ್ತಮ ಆಮ್ಲಜನಕವನ್ನು ಹೊರಸೂಸಿ ಬೆಂಗಳೂರಿನ ಜನಜೀವನಲ್ಲಿ ಆರೋಗ್ಯದ ಗುಣಮಟ್ಟವನ್ನು ಬಲಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದೆ.

ಹೀಗಾಗಿ, ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯ ಕುರಿತು ಹೊರಡಿಸಿದ್ದ ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ವಲಯದ ಮಿತಿಯನ್ನು ಕಡಿಮೆ ಮಾಡಿರುವುದನ್ನು ವಿರೋಧಿಸಿ ನಮ್ಮ ಬೆಂಗಳೂರು ಫೌಂಡೇಶನ್, ರಾಜ್ಯ ಸರ್ಕಾರದ ಮುಖೇನ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಸಲ್ಲಿಸಿ, ಈ ಹಿಂದೆ ಇದ್ದ ಪರಿಸರ ಸೂಕ್ಷ್ಮ ವಲಯದ ಮಿತಿ 268.96 ಚದರ ಕಿ.ಮೀ ಪ್ರದೇಶವನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಕೋರಿಕೆ ಸಲ್ಲಿಸಿತ್ತು.

ಆದರೆ, ದುರಂತವೆನ್ನುವಂತೆ ಸರ್ಕಾರವೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ಪ್ರದೇಶದ ಮಿತಿಯನ್ನು 268.96 ಚದರ ಕಿ.ಮೀ ನಿಂದ 168.84 ಚದರ ಕಿ.ಮೀ ಗೆ ಇಳಿಸಲು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿದೆ. ಇಲ್ಲಿನ ಪರಿಸರ ಸೂಕ್ಷ್ಮ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ರಕ್ಷಾ ಕವಚವಾಗಿದ್ದು, ಇದರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಪರಿಸರವೇ ಚಿದ್ರಗೊಂಡು ವಿನಾಶದ ಹಾದಿ ಹಿಡಿಯುತ್ತದೆ.

ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿತಗೊಳಿಸುವುದರಿಂದ ಅದರ ಪ್ರತಿಕೂಲ ಪರಿಣಾಮ ಬೆಂಗಳೂರು ನಿವಾಸಿಗಳ ಆರೋಗ್ಯ ಮೇಲೆ ನೇರವಾಗಿ ಬಾಧಿಸುತ್ತದೆಯಲ್ಲದೆ, ಜನರ ಸಂತೋಷ, ನೆಮ್ಮದಿಯ ಮೇಲೆ ತೀವ್ರತರದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಪ್ರಾಣಿಗಳ ಸಂಚಲನಾ ಪ್ರದೇಶಕ್ಕೆ ಅಡ್ಡಿಯಾಗುತ್ತದೆಯಲ್ಲದೆ, ಮಾನವ-ಪ್ರಾಣಿ ಸಂಘರ್ಷಕ್ಕೂ ಕಾರಣವಾಗುತ್ತದೆ. ಕಾವೇರಿ ನದಿಗೆ ನೀರೂರಿಸುವ ಜಲಮೂಲಗಳನ್ನೂ ಬರಿದು ಮಾಡುವುದರೊಂದಿಗೆ ನಮ್ಮ ನೀರಿನ ನಲ್ಲಿಗಳು ಬಹುಬೇಗನೇ ಬತ್ತಿಹೋಗುವ ಅಪಾಯವಿದೆ. ಈಗಾಗಲೇ ಬೆಂಗಳೂರಿನ ಶೇ.25 ರಷ್ಟು ಮಕ್ಕಳಲ್ಲಿ ಅಸ್ತಮಾ ಖಾಯಿಲೆಯಿರುವುದು ದಾಖಲಾಗಿದೆ. ಸರ್ಕಾರದ ನಿರ್ಧಾರಗಳಿಂದ ಬೆಂಗಳೂರಿನಲ್ಲಿ ಮತ್ತಷ್ಟು ಮಕ್ಕಳು ಅಸ್ತಮಾ ರೋಗಕ್ಕೆ ತುತ್ತಾಗುವ ಭೀತಿಯಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ, ಜನಸಾಮಾನ್ಯರ ದೃಷ್ಟಿಯಲ್ಲಿ ವಾಸ್ತವಾಂಶವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆಯೇ ಹೊರತು, ಸ್ವಹಿತಾಸಕ್ತಿ ಹೊಂದಿರುವವರ ಪರ ವಕಾಲತ್ತು ವಹಿಸುವುದಲ್ಲ.

ಇದೀಗ, ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ, ಸರ್ಕಾರ ತಳೆದಿರುವ ಧೋರಣೆಯು ಸಮಾಜ ವಿರೋಧಿ ಶಕ್ತಿಗಳ ಪ್ರಭಾವಕ್ಕೊಳಗಾಗಿರುವಂತಿದೆ. ಪರಿಸರ ಸೂಕ್ಷ್ಮ ವಲಯದ ಮಿತಿಯನ್ನು ಕಡಿತಗೊಳಿಸಿ, ಉಳಿದ ಭೂಮಿಯನ್ನು ಕಬಳಿಸಿ ಅದನ್ನು ಅಕ್ರಮ ಸಕ್ರಮ ಯೋಜನೆಯ ಮುಖಾಂತರ ತಮ್ಮ ವಶಕ್ಕೆ ತೆಗೆದುಕೊಳ್ಳುವ ಹುನ್ನಾರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.  

ಈ ರೀತಿಯ ಜನವಿರೋಧಿ ನೀತಿಗಳ ಅನುಷ್ಠಾನಕ್ಕೆ ಸರ್ಕಾರ ಯಾವುದೇ ರೀತಿಯಲ್ಲಿ ಅನುವು ಮಾಡಿಕೊಡಬಾರದು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟಿನ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಸರ್ವ ಜನರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಬೇಕು.

ಈ ನಿಟ್ಟಿನಲ್ಲಿ, ಬನ್ನೇರುಘಟ್ಟದ ಪರಿಸರ ಸೂಕ್ಷ್ಮ ವಲಯದ ಮಿತಿಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದೆ, ಇದೀಗ ಹೊರಡಿಸಲಾಗಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕೆಂಬುದೇ ನಮ್ಮ ಕಳಕಳೀಯ ಮನವಿಯಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್, ಜನಪರ ಹೋರಾಟಗಾರರು, ಪರಿಸರವಾದಿಗಳು ಹಾಗೂ ಬೆಂಗಳೂರಿನ ನಾಗರಿಕರು ಮಾರ್ಚ್ 22, 2020 ರಂದು ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ‘#ಸೇವ್ ಬನ್ನೇರುಘಟ್ಟ’ ಎಂದು ಇಂಗ್ಲೇಷಿನಲ್ಲಿ ಟೈಪಿಸಿ ಮಹಾ ಅಭಿಯಾನವನ್ನು ನಡೆಸಿದರು.

ಕೋವಿಡ್ 19 ಸಾಂಕ್ರಾಮಿಕದ ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದಾದ್ಯಂತ ಈ ಅಭಿಯಾನ ಟ್ರೆಂಡಿಂಗ್ ಆಗಿ ಮಾರ್ಪಟ್ಟಿತ್ತಲ್ಲದೆ, ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಟ್ವೇಟ್ ಗಳನ್ನು  ಬೆಂಗಳೂರಿನ ನಿವಾಸಿಗಳೇ ಮಾಡಿರುವುದು ವಿಶೇಷ.

ಈ ಮಹಾ ಅಭಿಯಾನದ ಮೂಲಕ ನಮ್ಮ ಬೆಂಗಳೂರು ಫೌಂಡೇಶನ್ ಮತ್ತು ಬೆಂಗಳೂರಿನ ನಾಗರಿಕರು ಸರ್ಕಾರವನ್ನು ಮನವಿ ಮಾಡಿಕೊಳ್ಳುವುದೇನೆಂದರೆ, ಈ ಕೂಡಲೇ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಮಾಡಿ, ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ ಮಿತಿಯನ್ನು 268.96 ಚದರ ಕಿ.ಮೀ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ಹೊರಡಿಸಲಾದ ಅಧಿಸೂಚನೆಯನ್ನು ಕೈಬಿಡಬೇಕು ಎಂಬುದಾಗಿದೆ. 

Post a comment