nbf@namma-bengaluru.org
9591143888

ಅಭಿಯಾನಗಳು

ಆರ್‍ಎಂಪಿ 2031: ಅಸಾಂವಿಧಾನಿಕ, ಲೋಪಗಳ ಸಾಗರ, ದೋಷಪೂರಿತ ಫಲಿತಾಂಶ

ಜನವರಿ 23, 2018ರಂದು ನಮ್ಮ ಬೆಂಗಳೂರು ಪ್ರತಿಷ್ಠಾನವು ಪುನರ್‍ವಿಮರ್ಶಿತ ಮಾಸ್ಟರ್ ಯೋಜನೆಯ ಕರಡಿಗೆ ತನ್ನ ಆಕ್ಷೇಪಗಳನ್ನು ಸಲ್ಲಿಸಿತು. ಇದು ಪ್ರತಿಷ್ಠಾನವು ನಗರ ಯೋಜಕರು, ಪರಿಣತರು, ನಿವಾಸಿಗಳ ಕಲ್ಯಾಣ ಸಂಘಟನೆಗಳು ಹಾಗೂ ಆಸಕ್ತರೊಡನೆ ನಡೆಸಿದ ಸಂವಾದ, ಚರ್ಚೆಗಳ ಸರಣಿಯ ಮುಂದುವರಿದ ಭಾಗವಾಗಿತ್ತು.

ಸರೋವರಗಳ ಮೂಲಕ ಹಾದುಹೋಗುವ ರಸ್ತೆಗಳು, ಸರೋವರಗಳನ್ನು ತಪ್ಪಾಗಿ ಹೆಸರಿಸಿರುವುದು, ರಸ್ತೆಗಳ ಅಳತೆ ತಪ್ಪಾಗಿ ನಮೂದಿಸಿರುವುದು, ಸಾರ್ವಜನಿಕ ಸ್ಥಳಗಳು ಮತ್ತು ಜಲಾಶಯಗಳು ನಾಪತ್ತೆಯಾಗಿರುವುದು ಹಾಗೂ ಚರಂಡಿ ವ್ಯವಸ್ಥೆಗಳನ್ನು ಅಸ್ಪಷ್ಟವಾಗಿ ಗುರುತಿಸಿರುವುದು ಸೇರಿದಂತೆ ಆರ್‍ಎಂಪಿ 2013ರ ಕರಡಿನಲ್ಲಿ ಹಲವು ಲೋಪಗಳು(ಭೂಪಟದ ರಚನೆಯಲ್ಲೋ ಅಥವಾ ಅಲ್ಲವೋ ಎನ್ನುವುದು ನಿಗೂಢ) ಇದ್ದವು.

ಬೆಂಗಳೂರಿನಲ್ಲಿ ಜನರ ಜೀವನದ ಗುಣಮಟ್ಟ ಕಡಿಮೆಯಾಗಲು ಇಡೀ ನಗರಕ್ಕೆ ಅಗತ್ಯವಾದ ಮೂಲಸೌಕರ್ಯ ಹಾಗೂ ಸೇವೆಯನ್ನು ಪೂರೈಸುವಲ್ಲಿನ ವೈಫಲ್ಯ ಕಾರಣವಾಗಿದ್ದು, ನಾನಾ ಸಂಸ್ಥೆಗಳನ್ನು ಒಳಗೊಂಡ ಸೂಕ್ತ ಕಾರ್ಯನೀತಿಗಳ ಮೂಲಕ ಬೆಂಗಳೂರನ್ನು ಮತ್ತೆ ಗಳಿಸಿಕೊಳ್ಳುವ ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ಆರ್‍ಎಂಪಿ 2031 ವಿಫಲವಾಗಿದೆ. ಭೂಮಿ ಬಳಕೆಗೆ ಮುಕ್ತ ಅವಕಾಶ ನೀಡಲಾಗಿದ್ದರೂ, ನಗರದ ಮೇಲೆ ಒತ್ತಡ ಹೇರುತ್ತಿರುವ ಸಂಸ್ಥೆಗಳ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ಇದರಿಂದ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಸಂಚಾರ ಮತ್ತು ಸಾಗಣೆ, ವಲಯೀಕರಣ, ಪರಿಸರ ಮತ್ತು ಬೆಂಕಿ ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುತ್ತಿವೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಆಡಳಿತಾಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ ಹೇಳುತ್ತಾರೆ,” ಉದ್ದೇಶಿತ ಆರ್‍ಎಂಪಿ 2031ರಲ್ಲಿನ ಅತ್ಯಂತ ಮುಖ್ಯ ಸಂಗತಿಯೆಂದರೆ, ಮುನ್ಸಿಪಲ್ ಯೋಜನಾ ಸಮಿತಿ(ಎಂಪಿಸಿ)ಯ ಅಧಿಕಾರವನ್ನು ಬಿಡಿಎ ಕಿತ್ತುಕೊಂಡಿರುವುದು. ಭಾರತದ ಸಂವಿಧಾನದ ವಿಧಿ 243 ಝಡ್‍ಇ ಹಾಗೂ ಬೆಂಗಳೂರು ಮೆಟ್ರೋಪಾಲಿಟನ್ ಸಮಿತಿ ನಿಯಮಗಳು 2013ರ ಪ್ರಕಾರ, ಮುನ್ಸಿಪಾಲಿಟಿಗಳು ನೀಡಿದ ಮಾಹಿತಿಯನ್ನು ಅಧ್ಯಯನ ಮಾಡುವುದು ಹಾಗೂ ಅದಕ್ಕೆ ಅನುಗುಣವಾಗಿ ಕಾರ್ಯಯೋಜನೆ ಸಿದ್ಧಪಡಿಸುವುದು ಎಂಪಿಸಿ ಕರ್ತವ್ಯ.       

ಎರಡನೆಯದಾಗಿ, ಪುನರ್‍ವಿಮರ್ಶಿತ ಮಾಸ್ಟರ್ ಯೋಜನೆಯ ಕರಡು 2031(ಆರ್‍ಎಂಪಿ) ಭಾರಿ ಗಾತ್ರದ ದಾಖಲೆಯಾಗಿದ್ದು, ನಕ್ಷೆಯಲ್ಲಿನ ಹಲವು ದೋಷಗಳು, ಅಂತರ್ಗತ ದ್ವಂದ್ವಗಳು ಹಾಗೂ ಅಸಮರ್ಪಕ ತೀರ್ಮಾನಗಳಿಂದ ಅವರ ಉಪಯುಕ್ತತೆ ಕಡಿಮೆಯಾಗಿದೆ.

ಮೂರನೆಯದಾಗಿ, ಆರ್‍ಎಂಪಿಯ ಭಾರಿ ಯೋಜನೆಗೆ ಇನ್ನಿತರ ಅಪರೋಕ್ಷ ಸೇವಾ ಸಂಸ್ಥೆಗಳು ಸಮ್ಮತಿಸದೆ ಇರುವುದು ಪ್ರಮುಖ ಲೋಪವಾಗಿದೆ. ಜನಸಂಖ್ಯಾ ಅಂಕಿಅಂಶಗಳನ್ನು ತಪ್ಪಾಗಿ ಲೆಕ್ಕ ಹಾಕಿದೆಯಲ್ಲದೆ, ತೀರ್ಮಾನಕ್ಕೆ ಬರಲು ಬಳಸಿದ ವಿಧಾನವನ್ನು ಬಹಿರಂಗಗೊಳಿಸಿಲ್ಲ”

ಹೆಚ್ಚುವರಿ ಓದು: ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಪಿ)ಯ ಸಬಲೀಕರಣ

Post a comment